ಫುಲ್ ಪೈಸಾ ವಸೂಲ್

ಫುಲ್ ಪೈಸಾ ವಸೂಲ್

 

ಸುಮಾರು ೩೦ ವರ್ಷಗಳ ಹಿಂದಿನ ಘಟನೆ; ವಕೀಲ ವೃತ್ತಿ ಪ್ರಾರಂಭಿಸಿದ ಹೊಸತರಲ್ಲಿ, ನಾನು ಕಲಾಪಗಳನ್ನು ಮುಗಿಸಿ ನ್ಯಾಯಲಯದಿಂದ ಹೊರಗೆ ಬರುತ್ತಿದ್ದೆ; ನನಗೆ ಗೊತ್ತಿರುವ ನ್ಯಾಯಾಲಯದ ಒಬ್ಬ ಸಿಬ್ಬಂದಿ ನನ್ನನ್ನು ನಿಲ್ಲಿಸಿ ಮಾತನಾಡಿಸಿದರು; ಉಭಯ ಕುಷಲೋಪರಿಯ ನಂತರ, ಅವರಲ್ಲಿ ಯಾವುದೋ ಒಂದು ವಿಚಾರದ ಬಗ್ಗೆ ಮನಸ್ಸಿನಲ್ಲಿ ಕಿರಿಕಿರಿ ಇದೆ ಎನಿಸಿತು; ವಿಚಾರಿಸಿದಾಗ, ತನ್ನ ಆತಂಕವನ್ನು ಆತ ಹೊರ ಹಾಕಿದರು; ಅವರ ನಿಕಟ ಸಂಬಂಧಿಕರಿಗೆ ಒಂದು ಕಾನೂನು ಸಮಸ್ಯೆ ಉಂಟಾಗಿದೆ. ಅದರ, ಪರಿಹಾರ ಸಾಧ್ಯವೇ ಎಂದು ಪೂರ್ತಿ ಮಾಹಿತಿಯನ್ನು ನನ್ನ ಮುಂದಿಟ್ಟರು. ಅವರ ವಿಶ್ಲೇಷಣೆಯಿಂದ, ಅವರ ಸಂಬಂಧಿಯ ಸಂಕಷ್ಟಕ್ಕೆ ಕಾನೂನಿನಲ್ಲಿ ಪರಿಹಾರವೇ ಇಲ್ಲ ಎಂದೆನಿಸಿತು. ಆದರೂ ಸಮಾಧಾನಿಸಿ, ಅವರ ಸಂಬಂಧಿಯನ್ನು ನನ್ನ ಕಛೇರಿಗೆ ಕಳುಹಿಸಿ ಎಂದು ಹೇಳಿ ಹೊರಟೆ.

ಅಂತೆಯೇ, ಅದೇ ಸಂಜೆ ಅವರ ಸಂಬಂಧಿ ಮತ್ತು ಪತ್ನಿ ನನ್ನ ಕಛೇರಿಗೆ ಬಂದರು;  ಕೆಲವು ವರ್ಷಗಳ ಹಿಂದೆ; ಅವರ ಸಹೋದ್ಯೋಗಿ ವಾಹನ ಖರೀದಿಸಲು, ಇವರಿಂದ ಲಕ್ಷಗಟ್ಟಲೇ ನಗದು ಹಣ ತುರ್ತಾಗಿ ಪಡೆದಿದ್ದು, ಶ್ರೀಘ್ರದಲ್ಲೇ ಹಿಂದಿರುಗಿಸುವುದಾಗಿ ಭರವಸೆ ಕೊಟ್ಟಿದ್ದರೂ ಸಹ, ಎಷ್ಟು ಗೋಗರೆದಿದ್ದರೂ ಹಿಂದಿರುಗಿಸಿರಲಿಲ್ಲ; ಅವರ ಆರ್ಥಿಕ ಸ್ಥಿತಿಗತಿಗಳನ್ನು ಅರಿತಿದ್ದ ಇವರು ಗೆಳೆಯನಿಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ, ತಮ್ಮ ಕೈಮೀರಿ, ತಮ್ಮಲ್ಲಿದ್ದ ಎಲ್ಲಾ ಉಳಿತಾಯವನ್ನು ಸೇರಿಸಿ, ಗೆಳೆಯನಿಗೆ ಸಹಾಯ ಮಾಡಿದ್ದರು; ಮಾತುಕೊಟ್ಟಂತೆ ಹಣವನ್ನು ಆರು ತಿಂಗಳ ಒಳಗೆ ಹಿಂದಿರುಗಿಸಬೇಕಿತ್ತು; ಸುಮಾರು ದಿವಸ ಆತ ಇವರಿಂದ ಕಣ್ಮರೆಸಿಕೊಂಡು ಓಡಾಡುತ್ತಿದ್ದ; ಇವತ್ತು ಬರಬಹುದು, ನಾಳೆ ಬರಬಹುದು ಎಂದು ಕಾದು ಕಾದು ಕೊನೆಗೆ ವಿಧಿಯಿಲ್ಲದೇ ಒಂದು ದಿನ ಕೇಳಿಯೇ ಬಿಟ್ರು;  ಆಗ ಆತ, ನಾನು ನಿಮ್ಮಿಂದ ಹಣವನ್ನೇ ಪಡೆದಿಲ್ಲ, ಏನು ಬೇಕಾದ್ರು ಮಾಡ್ಕೊಳಿ ಎಂದನಂತೆ, ಮತ್ತೆ ಮತ್ತೆ ಹೋಗಿ ಗೋಗರೆದುಕೊಂಡರೂ ಪ್ರಯೋಜನವಾಗಲಿಲ್ಲ. ಪೋಲಿಸ್ ಠಾಣೆಗೆ ಹೋದ್ರೆ ಇವರಿಗೇ ಬೈದು ಹಿಂದೆ ಕಳುಹಿಸಿದ್ರಂತೆ.

ಪೂರ್ತಿಯಾಗಿ ಆಲಿಸಿದ ನಂತರ ವಕೀಲನಂತೆ ಪ್ರಶ್ನೆಗಳ ಸುರಿಮಳೆಗರೆದೆ; ಪ್ರೊಮಿಸ್ಸರಿ ನೋಟ್ ಇದೆಯಾ? ಚೆಕ್ ಕೊಟ್ಟಿದ್ರಾ? ಏನಾದರೂ ಪತ್ರ ವ್ಯವಹಾರ ದಾಖಲೆ? ವಗೈರೆ…. ಎಲ್ಲದಕ್ಕೂ ನಕಾರ….. ಮತ್ತೆ ಮಾಮೂಲಿ ಡೈಲಾಗ್!!! ಜಾಸ್ತಿ ಕೇಳಿದ್ರೆ, ಸರ್ ಅವೆಲ್ಲಾ ಇದ್ದಿದ್ರೆ ನಾವು ನಿಮ್ಮ ಹತ್ರ ಯಾಕೆ ಬರ್ತಿದ್ವಿ? ಹಾಗಾದ್ರೆ ಏನು ದಾರಿ ಇಲ್ಲವಾ ಅಂತ ಕೇಳಿದರು? ಪೇಚು ಮೋರೆ ಮಾಡಿಕೊಂಡು ಹೋದ್ರು.

ಮರುದಿನ ಮತ್ತೆ, ನ್ಯಾಯಾಲಯದ ಸಿಬ್ಬಂದಿ ನನ್ನನು ಭೇಟಿ ಮಾಡಿ, ನನಗೆ ಸುಮಾರು ವಕೀಲರು ಗೊತ್ತು, ಆದರೆ ಅವರೆಲ್ಲರನ್ನೂ ಬಿಟ್ಟು ನಿಮ್ಮ ಹತ್ರ ಯಾಕೆ ಕಳುಹಿಸಿದೆ ಹೇಳಿ? ಎಂದು ನನಗೆ ಕ್ಲಾಸ್ ತಗೊಂಡ್ರು, ನನ್ನನ್ನು ಸ್ವಲ್ಪ ಹೊಗಳಿ, ನೀವು ಯುವಕರಾಗಿ ವೃತ್ತಿಯಲ್ಲಿ ಮುಂದೆ ಬರಬೇಕೆಂದಿದ್ರೆ ಇನ್ನೋವೇಟಿವ್ ಆಗಬೇಕು ಎಂದೆಲ್ಲ ಬುದ್ಧಿವಾದ ಹೇಳಿದರು, ಒಂದು ಕಡೆ ಪುಕ್ಕಟೆ ಕಕ್ಷೀದಾರ, ಇನ್ನೊಂದೆಡೆ ಇವರ ಪುಕ್ಕಟೆ ಅಡ್ವೈಸು; ದಂಪತಿಗಳು ಮತ್ತೆರಡು ಬಾರಿ ಬಂದು ಹೋದರು, ಮತ್ತದೇ ಕಥೆ, ಮತ್ತದೇ ಡೈಲಾಗ್. ಒಂದು ಕಡೆ ಆ ಸಿಬ್ಬಂದಿ ನನ್ನ ಮೇಲೆ ಇಟ್ಟ ವಿಶ್ವಾಸ, ಮತ್ತೊಂದೆಡೆ ನನ್ನ ಕಕ್ಷೀದಾರರ ಅಸಹಾಯಕತೆ; ಏನ್ ಸಾರ್, ಈಸ್ ಜಸ್ಟಿಸ್ ಬ್ಲೈಂಡ್? ಎನ್ನುವ ಡೈಲಾಗ್ ಕೇಳಿ ಕೇಳಿ ಸಾಕಾಯ್ತು; ನನಗ್ಯಾಕೆ ಅವರ ಸಂಕಟ ಇನ್ನೂ ಅರ್ಥ ಆಗ್ತಿಲ್ಲ, ಇಷ್ಟು, ಕ್ಲಿಯರ್ ಇದ್ರು, ಕೇಸ್ ಹಾಕಲು ನನಗ್ಯಾಕೆ ಹಿಂಜರಿಕೆ, ಅನ್ನೋ ಸಂಶಯ ಅವರಿಗೆ, ಈ ಗಲಾಟೆ ಒಳಗೆ ಲಿಮಿಟೇಷನ್ ಆಗಿ ಹೋಗಿದೆ ಎನ್ನುವ ದೊಡ್ಡ ಅನುಮಾನ ನನಗೆ, ಆದರೆ ಅವರ ಬಳಿ ಪ್ರಸ್ತಾಪ ಮಾಡಲು ನನಗೆ ಧೈರ್ಯವೇ ಇರಲಿಲ್ಲ; ವಕೀಲನಾಗಿ ಈ ಗತಿ ಎದುರಿಸೋ ಬದಲು, ಯಾವುದಾದ್ರೂ ಸರ್ಕಾರಿ ನೌಕರನಾಗಿದ್ದಿದ್ದರೆ,  ತಿಂಗಳು-ತಿಂಗಳು ಸಂಬಳ, ತಗೊಂಡು ಆರಾಮವಾಗಿ ಇರಬಹುದಿತ್ತು ಅನ್ನೋ ಭಾವನೆ ನನಗೆ!

ಕಛೇರಿಯಲ್ಲಿ ಒಂದು ದಿನ ಇದೇ ರೀತಿ ಕೂತಿದ್ದಾಗ, ಆ ಸಿಬ್ಬಂದಿ ಪೋನ್ ಮಾಡಿ ’ಮತ್ತೆ ಅವರನ್ನ ಕಳುಹಿಸ್ತಾ ಇದ್ದೀನಿ ಏನಾದ್ರು ಒಂದು ಫೈನಲ್ಲಾಗಿ ಅಡ್ವೈಸ್ ಮಾಡಿ ಸರ್ ಅಂದ್ರು’; ಕಕ್ಷಿದಾರರು ಮತ್ತೆ ಪ್ರತ್ಯಕ್ಷ, ಮತ್ತದೇ ಪ್ರಶ್ನೆ, ಮತ್ತದೇ ಅಳುಮುಖ.

ಸುಮ್ನೆ ಅದೇ ವಿಷಯಗಳನ್ನು ಕೆದಕಿದೆ; ಯಾವುದಕ್ಕೂ ಸಕಾರಾತ್ಮಕ ಉತ್ತರ ಇಲ್ಲ, ನನಗೂ ಸಾಕಾಗಿ ಹೋಗಿತ್ತು. ಹೊರಗಡೆಯಿಂದ, ಫೀಸ್ ಕೊಡೊ ಹೊಸ ಕಕ್ಷಿದಾರ ಕಾಯ್ತಿದ್ದಾರೆ ಈಕಡೆ, ಇವರು ಕುರ್ಚಿಯಿಂದ ಎದ್ದೇಳ್ತಿಲ್ಲ;  ಮಾತು ಬದಲಾಯಿಸಿದೆ. ಪೆರಿ ಮೇಸನ್ ನೆನಪಾಯ್ತು; ನಿಮ್ಮ ಗೆಳೆಯನ ಮನೆ ಎಲ್ಲಿ? ಏನು ಕೆಲಸ? ಎಷ್ಟು ಸಂಬಳ? ಮದುವೆಯಾಗಿದ್ದಾರಾ? ಮಕ್ಕಳೆಷ್ಟು? ಹೆಂಡ್ತಿ ಓದಿದ್ದಾರಾ? ಕೆಲಸದಲ್ಲಿದ್ದಾರಾ? ಹೆಂಡ್ತಿ, ತಂದೆ, ತಾಯಿ ಎಲ್ಲಿದ್ದಾರೆ? ಎಲ್ಲಾದಕ್ಕೂ ಪ್ರಾಂಪ್ಟ್ ಉತ್ತರ. ನನ್ನಿಂದ ಏನಾದ್ರು ಮಿರಾಕಲ್ ಆಗುತ್ತಾ ಅನ್ನುವ ರೀತಿ ಅವರಿಬ್ಬರಲ್ಲಿ ಉತ್ಸುಕಥೆ; ಕೊನೆಗೆ, ಏನೂ ತೋಚದೆ ಬಹಳ ಯೋಚಿಸಿದಂತೆ ಮಾಡಿ,  ಆತನ ಹೆಂಡ್ತಿ ತಾಯಿ, ತಂದೆ ನಿಮಗೆ ಗೊತ್ತಾ? ಅವರ ಹತ್ರ ಯಾವಾಗಲಾದ್ರು ಮಾತಾಡಿದ್ದೀರಾ? ಯಾಕೆ ಅವರನ್ನು ಒಮ್ಮೆ ಕೇಳಬಾರದು, ಈ ವಿಚಾರದ ಬಗ್ಗೆ?. ತಂದೆ-ತಾಯಿ ನಮ್ಮನ್ನು ಹೊರಗೆ ಹಾಕಿದ್ರೆ ಏನ್ ಮಾಡೋದು ಅನ್ನೋ ಭಯ ಅವರಿಗೆ; ಒಟ್ಟಿನಲ್ಲಿ, ಇವರನ್ನು ಹೇಗಾದ್ರು ಮಾಡಿ ಕಛೇರಿಯಿಂದ  ಹೊರಹಾಕುವ ಪ್ರಯತ್ನ, ನನ್ನದು. ಹೋಗಿ, ಪ್ರಯತ್ನಿಸಿ ತಪ್ಪೇನಿಲ್ಲ ಎಂದು ಹುರಿದುಂಬಿಸಿದೆ. ದುಡ್ಡು ಬರ್ಲಿಲ್ಲ ಅಂದ್ರೆ ಅಳಿಯನ ಮೇಲೆ ಕೇಸ್ ಹಾಕ್ತೀವಿ, ಅನ್ನಿ ಅಂದೆ.

ಸಾರ್, ನಾಳೇನೇ ಹೋಗಿ, ಆತನ ಅತ್ತೆ ಹತ್ತಿರ ಮಾತಾಡ್ತೀವಿ, ನೋಡ್ತೀವಿ ಎಂದು ಎದ್ದು ಹೋದರು! ನನ್ನಿಂದ ಬಹಳ ದೊಡ್ಡ ಕಾನೂನು ಸಲಹೆ ಪಡೆದೆ ಅನ್ನೋ ಸಂತೋಷ ಅವರಿಗೆ, ಆದರೆ, ನನ್ನ ಪಾಡು ಬೇರೆ, ಫೀಸೂ ಇಲ್ಲ, ಟೈಮೂ ವೇಸ್ಟ್.

ಎರಡು ವಾರದ ನಂತರ, ನ್ಯಾಯಾಲಯದ ಸಿಬ್ಬಂದಿ, ಸಂಬಂಧಿ ಮತ್ತು ಪತ್ನಿ ಎಲ್ಲಾ ನನ್ನ ಕಛೇರಿಯಲ್ಲಿ ಬೆಳ್ಳಂಬೆಳಗ್ಗೆ ಹಾಜರು; ನಾನು ಒಳಗೆ ಬರುತ್ತಿದ್ದಂತೆ, ಎದ್ದು ನಿಂತು, ನನ್ನ ಕೊಠಡಿಗೆ, ನನ್ನನ್ನೇ ಸ್ವಾಗತಿಸಿದರು. ಭಾರತ ತಂಡ ಕ್ರಿಕೆಟ್ನಲ್ಲಿ ವಿಶ್ವ ಕಪ್ ಗೆದ್ದಿದೆ ಅನ್ನೋ ಅಷ್ಟು ಸಂತೋಷ ಅವರ ಮುಖದಲ್ಲಿ. ಬಂತು ಸಾರ್, ಎಲ್ಲಾ ದುಡ್ಡು ಹಿಂದೆ ಬಂತು, ಥ್ಯಾಂಕ್ಸ್, ಅಂದ್ರು;  ನನಗೆ ಆಶ್ಚರ್ಯ!!!!

ಆತನ ಅತ್ತೆ ಬಳಿ ಹೋಗಿ ತಮ್ಮ ಅಳಲನ್ನು ತೋಡಿ ಕೊಂಡ್ರಂತೆ; ಅತ್ತೆ, ಬಹಳ ತೂಕದ ವ್ಯಕ್ತಿ, ಕೈ ಪೂರ್ತಿ ಚಿನ್ನದ ಬಳೆ, ದೊಡ್ಡ ಮನೆ, ಫುಲ್ಲ್ ಆಳು, ಕಾರು; ಮೊದಲಿಗೆ ಇವರ ಹೇಳಿಕೆ ಅವರು ನಂಬಲಿಲ್ಲವಂತೆ; ಆಮೇಲೆ ಪೂರ್ತಿಯಾಗಿ ಆಲಿಸಿದ ನಂತರ, ಯಾರಿಗೋ ಕಾಲ್ ಮಾಡಿ, ಸ್ವಲ್ಪ ಯೋಚನೆ ಮಾಡಿ, ಇವರಲ್ಲಿ ಐದು ದಿನಗಳ ಗಡುವು ಕೇಳಿದರಂತೆ. ಮತ್ತೆ ಹೋದಾಗ, ಆಕೆ ಚೆನ್ನಾಗಿ ಮಾತಾಡ್ಸಿ ಕಾಫಿ ಕೊಟ್ಟು, ಪೂರ್ತಿ ನಗದು ಹಣ, ಬಡ್ಡಿಸಮೇತ ಹಿಂದೆ ಕೊಟ್ಟು ಅಳಿಯನ ವರ್ತನೆಗೆ, ಸಾರಿ ಕೇಳಿದ್ರಂತೆ, ಈ ಕಲಿಯುಗದಲ್ಲಿ, ಇಂಥಹ ಒಳ್ಳೆಯ ಜನ ಇನ್ನೂ ಇದ್ದಾರೆ ಅನ್ನೋ ಖುಷಿ ಇವರಿಗೆ.

ನನ್ನ ಐಡಿಯಾನ ಹೊಗಳಿದ್ರು. ಅದಕ್ಕೆ ಸಾರ್ ನಿಮ್ಹತ್ರ ಬಂದಿದ್ದು, ಎಂದರು. ನನ್ನ ಕಕ್ಷೀದಾರರಿಗೆ ನೆಮ್ಮದಿ ಸಿಕ್ತು, ಬಹಳ ಮುಖ್ಯವಾಗಿ ನ್ಯಾಯಾಲಯದ ಸಿಬ್ಬಂದಿಯ ಕಣ್ಣೆದುರು ನಾನೊಬ್ಬ ಕ್ರಿಯಾತ್ಮಕ ವಕೀಲ! ನನ್ನ ಫೀಸ್ ಎಷ್ಟು ಎಂದು ಕೇಳಿದ್ರು, ಹೇಳೋ ಧೈರ್ಯ ನನಗಿರಲಿಲ್ಲ, ನಿಮ್ಮ ಸಲಹೆಯಿಂದ ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು, ಒಂದು ಲಕ್ಷ್ಮೀದೇವಿಯ ಫೋಟೊ ಉಡುಗೊರೆ ಕೊಟ್ರು. ತುಂಬಾ ಸಂತೋಷದಿಂದ ಹಿಂದಿರುಗಿದ್ರು, ನನಗೆ ಒಂದುಕಡೆ ಸಮಾಧಾನ, ಕೇಸ್ ಹಾಕದಿದ್ರೂ, ಫುಲ್ ಪೈಸಾ ವಸೂಲ್. ನನ್ನದಾಗಲೀ, ಕಾನೂನಿನ ಪಾತ್ರವಾಗಲಿ ಏನೂ ಇರಲಿಲ್ಲ, ಆದ್ರೆ ಇನ್ನೊಂದೆಡೆ ಅಸಮಾಧಾನ, ನಿಮಗೂ ಗೊತ್ತಾಗಿರಬೇಕು ಯಾಕೆ ಅಂತ!!!

ಇದೆಲ್ಲವನ್ನೂ ಚಾಚೂತಪ್ಪದೇ ಗಮನಿಸುತ್ತಿದ್ದ ನನ್ನ ಸಹೋದ್ಯೋಗಿ ಆನಂದ ತೀರ್ಥ, ಏನ್ ಸಾರ್, ಬಹಳ ಖುಷಿಯಾಗಿದ್ದೀರಾ? ಎಂದ; ಪೂರ್ತಿಯಾಗಿ ವಿವರಿಸಿದೆ; ಅವನಿಗೂ ಆಶ್ಚರ್ಯ. ಯಾರಿಗೂ ಬಗ್ಗದ ಆ ಪುಣ್ಯಾತ್ಮ ಅತ್ತೆಯ ಮಾತಿಗೆ ಇಷ್ಟು ಬೇಗ ಒಪ್ಪಿದ್ನೇ?

ಇದು ಇಂದಿಗೂ ಅರ್ಥವಾಗದ ಕಗ್ಗಂಟು!!!!!!

ನಾನು ಹೇಳಿದೆ:-

When no Law works, Mother-in- law works’!!!

 

ಅದಿರಲಿ, ಇದೂ ಒಂದು ರೀತಿ ADR ಅಲ್ವೆ? ನೀವೇ ಹೇಳಿ!!!!!

 

 S N Prashanth Chandra
ಪ್ರಶಾಂತ್ ಚಂದ್ರ.ಎಸ್.ಎನ್    (ನ್ಯಾಯವಾದಿ)

 

 

 

 

Share on . .

6 thoughts on “ಫುಲ್ ಪೈಸಾ ವಸೂಲ್”

  1. Good article. Presentation s lucid. Language s simple but engaging. Continue to share your experiences….All d best.

  2. Lovely read! Now I know where the “options” in your name started🙂 I remember Pitaji’s articles and his book. Great initiative and keep it coming.

  3. Adv Vijay A Gaonkar

    The suggestion given by Advocate to Client is not only due to frustrations but proved out to be the strongest law on this Universe

  4. S.sudarsanaReddy

    Under that particular circumstances,it was in fact a right suggestion and good idea.mother_in_law -worked than law of land.There are many more such laws like
    Father-in-law
    Son-in-law
    Daughter-in-law
    Use these laws also

  5. ಸರ್, ಲೇಖನದುದ್ದಕ್ಕೂ ಹಾಸ್ಯ ಮಾಡುತ್ತಲೇ ಜನ ಸಾಮಾನ್ಯರಿಗೆ ADR ಬಗ್ಗೆ ಸ್ಫುಟವಾದ ಮಾಹಿತಿಯನ್ನು, ಅಗಾಧ ಅನುಭವವನ್ನು ಸರಳಭಾಷೆಯಲ್ಲಿ ಹಂಚಿಕೊಂಡಿದ್ದೀರಿ. Humane touch to the legal (human) complexities. ಧನ್ಯವಾದಗಳು.

Leave a Comment

Your email address will not be published. Required fields are marked *